ಯಾವಾಗ ಎಲ್ಲಿ, ಯಾರಿಗೆ, ಹೇಗೆ ಅದೃಷ್ಟ ಒಲಿಯುತ್ತೆ ಎನ್ನುವುದನ್ನು ಯಾರಿಂದ ಕೂಡ ಊಹಿಸಲು ಸಾಧ್ಯವಾಗುವುದಿಲ್ಲ. ಕುರಿ ಕಾಯುತ್ತಾ ತನಗೆ ಇಷ್ಟಬಂದಂತೆ ಹಾಡುತ್ತಿದ್ದ ಹನುಮಂತ ಸರಿಪಮಪ ಸೀಸನ್ 15ರ ರನ್ನರ್ ಅಪ್ ಆಗುವುದಲ್ಲದೇ ಬಿಗ್ ಬಾಸ್ ಮನೆಯನ್ನು ಕೂಡ ಪ್ರವೇಶ ಮಾಡುತ್ತಾರೆ ಅಂದರೆ ತಮಾಷೆನಾ? ಇನ್ನು ಮಲಯಾಳಂ ಚಿತ್ರದಲ್ಲಿ ಕಣ್ಸನ್ನೆಯಿಂದನೇ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ಪ್ರಕಾಶ್ ವಾರಿಯರ್ ಅವರದ್ದು ಕೂಡ ಅದೃಷ್ಟನೇ. ಇಷ್ಟೇ ಯಾಕೆ ರೇಲ್ವೆ ಸ್ಟೇಷನ್‌ನಲ್ಲಿ ಲತಾ ಮಂಗೇಶ್ಕರ್ ಹಾಡನ್ನು ಹಾಡುತ್ತಿದ್ದ ರಾಣು ಮಂಡಾಲ್ ಅವರದ್ದು ಕೂಡ ಅದೃಷ್ಟವಲ್ಲದೇ ಮತ್ತೇನು? ಈ ಸಾಲಿಗೆ ಈ ವರ್ಷದ ಆರಂಭದಲ್ಲಿ ಸೇರಿಕೊಂಡವರು ಮೊನಾಲಿಸಾ.
ಮಹಾಕುಂಭಮೇಳಕ್ಕೆ ಬಂದವರನ್ನೆಲ್ಲ ತನ್ನ ಕಣ್ಣುಗಳ ಮೂಲಕವೇ ಸೆಳೆದ ಮೊನಾಲಿಸಾ ಅವರನ್ನು ಆ ನಂತರ ಬಣ್ಣದ ಲೋಕ ಕೈಬೀಸಿ ಕರೆಯಿತು. ಮೊನಾಲಿಸಾ ಹಾವ ಭಾವವನ್ನೆಲ್ಲ ಬದಲಾಯಿಸಲಾಯ್ತು. ಸನೋಜ್ ಮಿಶ್ರಾ ಎಂಬ ವ್ಯಕ್ತಿ ಮೊನಾಲಿಸಾ ಅವರಿಗೆ ನಾಯಕಿಯ ಸ್ಥಾನವನ್ನು ನೀಡಿದ. ಚಿತ್ರವನ್ನು ಕೂಡ ಶುರು ಮಾಡುವುದಾಗಿ ಹೇಳಿ.. ಮೊನಾಲಿಸಾ ಪಾಲಿಗೆ ಅಭಿನಯದ ಗುರು ಕೂಡ ಆದ. ‘ ದಿ ಡೈರಿ ಆಫ್ ಮಣಿಪುರ್’ ಎಂಬ ಶೀರ್ಷಿಕೆಯಡಿ ಚಿತ್ರವನ್ನು ಕೂಡ ಘೋಷಿಸಿದ್ದ. ಆದರೆ ಆ ನಂತರ.. ಝಾನ್ಸಿ ಮೂಲದ ಯುವತಿ ನೀಡಿದ ದೂರಿನ ಮೇರೆಗೆ ಸನೋಜ್ ಮಿಶ್ರಾ ಕಂಬಿ ಹಿಂದೆ ಕೂಡ ಹೋದ. ಹೀಗಾಗಿಯೇ ಅನೇಕರು ಮೊನಾಲಿಸಾ ಕಂಡ ಕನಸು ನನಸಾಗುವ ಮುನ್ನವೇ ಕಮರಿ ಹೋಯ್ತು ಎಂದು ಅಂದುಕೊಂಡಿದ್ದರು. ಸನೋಜ್ ಮಿಶ್ರಾ ಕಪಿಮುಷ್ಠಿಯಿಂದ ಅದ್ಹೇಗೋ 16ರ ಹರೆಯದ ಮೊನಾಲಿಸಾ ಪಾರು ಆದರಲ್ಲ ಎಂದು ಇನ್ನು ಕೆಲವರು ನಿಟ್ಟುಸಿರು ಬಿಟ್ಟಿದ್ದರು.
ಆದರೆ ಇದು ಬಣ್ಣದ ಲೋಕ. ಈ ಸೆಳೆತದಿಂದ ಪಾರಾಗಲು ಸಾಧ್ಯ ಇಲ್ಲ. ಪಾರಾಗುವ ಪ್ರಯತ್ನವನ್ನು ಅಪ್ಪಿ ತಪ್ಪಿ ಮಾಡಿದರೂ ಕೂಡ ಚಿತ್ರರಂಗ ಬಿಡುವುದಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಕಾಣೆಯಾದ ಮೊನಾಲಿಸಾ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಎಲ್ಲರನ್ನೂ ಅವಕ್ಕಾಗಿಸಿದ್ಧಾರೆ. ಹೌದು, ಚಿತ್ರರಂಗದಲ್ಲಿ ಮೊನಾಲಿಸಾ ಮೊದಲ ಮೆಟ್ಟಿಲನ್ನೇರಿದ್ದಾರೆ. ”ಸಾದ್ಗಿ” ಎಂಬ ಆಲ್ಬಂ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಉತ್ಕರ್ಷ್ ಸಿಂಗ್ ಈ ಹಾಡಿನಲ್ಲಿ ಮೊನಾಲಿಸಾಗೆ ಜೋಡಿಯಾಗಿದ್ದಾರೆ. ಸದ್ಯ ಈ ಹಾಡು ಅನೇಕರ ಗಮನ ಸೆಳೆಯುತ್ತಿದೆ. ಮೊನಾಲಿಸಾ ಅವರ ಈ ನಯಾ ಲುಕ್ ಅನೇಕರಿಗೆ ಕಿಕ್ಕೇರಿಸುತ್ತಿದೆ.
ಹಾಡು ಕಣ್ತುಂಬಿಕೊಂಡ ಅನೇಕರು ಮೊನಾಲಿಸಾ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಮೊನಾಲಿಸಾ ಮೊಗದಲ್ಲಿ ಅರಳಿದ ಭಾವಕ್ಕೆ ಮನ ಸೋಲುತ್ತಿದ್ದಾರೆ. ಇದು ಮೊದಲನೇ ಹಾಡು ಎಂಬ ಭಾವನೆ ಬರದಿರುವಷ್ಟು ಸೊಗಸಾಗಿ ಮೊನಾಲಿಸಾ ಹಾಡಿನಲ್ಲಿ ಅಭಿನಯಿಸಿದ್ದಾರೆ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಸಹಜವಾಗಿ ಮೊನಾಲಿಸಾ ಅವರ ಕಣ್ಣುಗಳ ಕುರಿತು ಕೂಡ ಚರ್ಚೆ ನಡೆಯುತ್ತಿದೆ. ಇನ್ನು ಉತ್ಕರ್ಷ್ ಸಿಂಗ್ ಮತ್ತು ಮೊನಾಲಿಸಾ ಅವರ ಕೆಮೆಸ್ಟ್ರೀಗೆ ಕೂಡ ಇಲ್ಲಿ ಅನೇಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಜೋಡಿಯನ್ನು ತುಂಬಾ ಸುಂದರವಾಗಿ ಸೆರೆ ಹಿಡಿಯಲಾಗಿದೆ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಬಿಡುಗಡೆಯಾದ ನಾಲ್ಕು ಗಂಟೆಯಲ್ಲಿ 26,000 ವೀಕ್ಷಣೆಯನ್ನು ಈ ಹಾಡು ಕಂಡಿದೆ. ಇನ್ನು 700ಕ್ಕೂ ಅಧಿಕ ಜನ ಹಾಡಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೇ ಉತ್ಕರ್ಷ್ ಸಿಂಗ್ ಈ ಹಾಡಿನಲ್ಲಿ ಕೇವಲ ನಾಯಕ ಮಾತ್ರವಲ್ಲ. ಈ ಹಾಡಿನ ನಿರ್ಮಾಪಕ ಕೂಡ ಹೌದು. ಸಾಹಿತ್ಯ ಮತ್ತು ಸಂಗೀತ ಕೂಡ ಇವರದ್ದೇ. ಇಷ್ಟೇ ಅಲ್ಲ ಹಾಡನ್ನು ಹಾಡಿರುವುದು ಕೂಡ ಉತ್ಕರ್ಷ್ ಸಿಂಗ್ ಅವರೇ. ಅಭಿಜಿತ್ ನಾಗ್ ಈ ಹಾಡನ್ನು ನಿರ್ದೇಶಿಸಿದ್ದಾರೆ. ಸದ್ಯ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮೊನಾಲಿಸಾ ತಮ್ಮ ಮೊದಲ ಪ್ರಯತ್ನದಲ್ಲಿ ಅನೇಕರ ಹೃದಯವನ್ನು ಗೆಲ್ಲುತ್ತಿದ್ದಾರೆ. ಮುಂದೊಂದು ದಿನ ಮೊನಾಲಿಸಾ ಬಾಲಿವುಡ್‌ನಲ್ಲಿ ಮಿಂಚಿದರೆ ಅಚ್ಚರಿ ಇಲ್ಲ ಎಂದು ಅನೇಕರು ಸದ್ಯ ಮಾತನಾಡಿಕೊಳ್ಳುತ್ತಿದ್ದಾರೆ.


