ಟಾಸ್ ಗೆದ್ದ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಓಲ್ಡ್ ಟ್ರಾಫೋರ್ಡ್ ಆತಿಥ್ಯ ವಹಿಸಿದೆ. ಟೂರ್ನಿಯಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಸತತ ನಾಲ್ಕನೇ ಬಾರಿಗೆ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಟೆಸ್ಟ್ 2 ಕಾರಣಗಳಿಂದಾಗಿ ಭಾರತಕ್ಕೆ ಮಹತ್ವದ್ದು. ಒಂದು, ಭಾರತ ಈ ಕ್ರೀಡಾಂಗಣದಲ್ಲಿ 9 ದಶಕದಲ್ಲಿ ಒಮ್ಮೆಯೂ ಟೆಸ್ಟ್ ಗೆದ್ದಿಲ್ಲ. ಮತ್ತೊಂದು, ಈ ಟೆಸ್ಟ್ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತರೆ ಸರಣಿಯನ್ನೇ ಕಳೆದುಕೊಳ್ಳಲಿದೆ. ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಶೋಯೆಬ್ ಬಷೀರ್ ಬದಲಿಗೆ ಡಾವ್ಸನ್ ತಂಡ ಕೂಡಿಕೊಂಡಿದ್ದಾರೆ.
ಇನ್ನು ಭಾರತ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ಕರುಣ್ ನಾಯರ್, ಆಕಾಶ್ದೀಪ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಹೊರಬಿದ್ದಿದ್ದಾರೆ. ಕರುಣ್ ಬದಲಿಗೆ ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಶಾರ್ದೂಲ್ ಠಾಕೂರ್ ಹಾಗೂ ಆಕಾಶ್ದೀಪ್ ಬದಲಿಗೆ ಅನ್ಶೂಲ್ ಕಂಬೋಜ್ ತಂಡ ಕೂಡಿಕೊಂಡಿದ್ದಾರೆ.
ಆಟಗಾರರ ಪಟ್ಟಿ
ಭಾರತ: ಕೆ ಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್(ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಅನ್ಶುಲ್ ಕಂಬೋಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ (ಆಡುವ 11): ಜ್ಯಾಕ್ ಕ್ರಾವ್ಲಿ, ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್. ಡಾವ್ಸನ್, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್
ಪಿಚ್ ರಿಪೋರ್ಟ್
ಮ್ಯಾಂಚೆಸ್ಟರ್ ಕ್ರೀಡಾಂಗಣದ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದೆ. ಇಲ್ಲಿ ಹೆಚ್ಚಿನ ಬೌನ್ಸರ್ಗಳೂ ಕಂಡುಬರಲಿದೆ. ಆದರೆ ಪಂದ್ಯ ಸಾಗಿದಂತೆ ಸ್ಪಿನ್ನರ್ಗಳು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
ವಿದಾಯದ ಪಂದ್ಯದಲ್ಲಿ ರಸೆಲ್ ಹೋರಾಟ ವ್ಯರ್ಥ ಆಸೀಸ್ ಗೆ ಸುಲಭ ಜಯ. ಕಿಂಗ್ಸ್ಟನ್ನ ಸಬಿನಾ ಪಾರ್ಕ್ನಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ದ ನಡೆದ ಎರಡನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ವಿದಾಯದ ಪಂದ್ಯದಲ್ಲಿ ವಿಂಡೀಸ್ನ ಆಲ್ರೌಂಡರ್ ದಿಟ್ಟ ಹೋರಾಟ ನೀಡಿದರೂ ತಂಡಕ್ಕೆ ಗೆಲುವು ದಕ್ಕಲಿಲ್ಲ ಅತ್ತ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಸೀಸ್ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ಎಂಟು ವಿಕೆಟ್ ನಷ್ಟಕ್ಕೆ 172 ರನ್ಗಳ ಸವಾಲಿನ ಮೊತ್ತ ಪೇರಿಸಿತು.
ಆರಂಭಿಕ ಬ್ಯಾಟರ್ ಬ್ರಂಡನ್ ಕಿಂಗ್ ಕೇವಲ 36 ಎಸೆತಗಳಲ್ಲಿ 51 ರನ್ ಗಳಿಸಿ (3 ಬೌಂಡರಿ, 4 ಸಿಕ್ಸರ್) ಅಬ್ಬರಿಸಿದರು. ಇನಿಂಗ್ಸ್ ಕೊನೆಯಲ್ಲಿ ಮಿಂಚಿದ ರಸೆಲ್ 15 ಎಸೆತಗಳಲ್ಲಿ 36 ರನ್ ಗಳಿಸಿದರು. ರಸೆಲ್ ಇನಿಂಗ್ಸ್ನಲ್ಲಿ ನಾಲ್ಕು ಸಿಕ್ಸರ್ ಹಾಗೂ ಎರಡು ಬೌಂಡರಿ ಸೇರಿತ್ತು. ಆಸೀಸ್ ಪರ ಆಯಡಂ ಜಾಂಪಾ ಮೂರು ವಿಕೆಟ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ನಥನ್ ಎಲ್ಲೀಸ್ ತಲಾ ಎರಡು ವಿಕೆಟ್ ಗಳಿಸಿದರು
ಗೋವಾ ತಂಡಕ್ಕೆ ಮರು ಸೇರ್ಪಡೆಗೊಂಡ ಮಾರ್ಕ್ವೆಜ್
ಭಾರತ ಪುರುಷರ ಫುಟ್ಬಾಲ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ ಮನೊಲೊ ಮಾರ್ಕ್ವೆಝ್ ಅವರು 2025-26ರ ಋತುವಿಗಾಗಿ ಎಫ್ಸಿ ಗೋವಾವನ್ನು ಮತ್ತೆ ಸೇರಿಕೊಂಡಿದ್ದಾರೆ. ಭಾರತ ಫುಟ್ಬಾಲ್ ತಂಡ ಸತತವಾಗಿ ಹಿನ್ನಡೆ ಕಾಣುತ್ತಿದ್ದ ಪರಿಣಾಮ ಈ ತಿಂಗಳ ಆರಂಭದಲ್ಲಿ ಸ್ಪೇನ್ನ ಮಾರ್ಕ್ವೆಝ್ ಪದತ್ಯಾಗ ಮಾಡಿದ್ದರು. ಮುಂಬರುವ ಋತುವಿಗೆ 56 ವರ್ಷದ ಮಾರ್ಕ್ವೆಝ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಎಫ್ಸಿ ಗೋವಾ ಘೋಷಿಸಿದೆ. ಅವರು ಭಾರತ ತಂಡಕ್ಕೆ ಕೋಚ್ ಆಗುವ ಮುನ್ನ ಗೋವಾ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.
2024ರ ಜೂನ್ನಲ್ಲಿ ಎರಡು ವರ್ಷಗಳ ಅವಧಿಗೆ ಮಾರ್ಕ್ವೆಝ್ ಅವರನ್ನು ಭಾರತ ತಂಡದ ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಆದರೆ, ಜುಲೈ 2ರಂದು ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಜೊತೆ ‘ಪರಸ್ಪರ ಸಮ್ಮತಿ’ಯ ಮೇರೆಗೆ ಅವರು ಪದತ್ಯಾಗ ಮಾಡಿದ್ದರು.


